ವೀಕೋ, ಗಿಯೋವಾನಿ ಬಟೀಸ್ಟ
	1668-1744. ಇಟಲಿಯ ದಾರ್ಶನಿಕ, ಇತಿಹಾಸಕಾರ, ನ್ಯಾಯಶಾಸ್ತ್ರಜ್ಞ, ವಿಮರ್ಶಕ ಹಾಗೂ ಕವಿ. 1668ರಲ್ಲಿ ನೇಪಲ್ಸ್‍ನಲ್ಲಿ ಹುಟ್ಟಿದ ಈತ ಅಲಂಕಾರಶಾಸ್ತ್ರದ (ರೆಟೊರಿಕ್) ಪ್ರಾಧ್ಯಾಪಕನಾಗಿ, ಇಟಲಿಯ ರಾಜನಲ್ಲಿ ಇತಿಹಾಸ ಲೇಖಕನಾಗಿ (ಹಿಸ್ಟೋರಿಯಾಗ್ರಾಫರ್) ತನ್ನ ಆಯುಷ್ಯಾವಧಿಯನ್ನು ಕಳೆದ. ಸಾಹಿತ್ಯ, ಕಲೆ, ಇತಿಹಾಸ ಕುರಿತು ಈತ ಅನೇಕ ಗ್ರಂಥಗಳನ್ನು ಬರೆದಿದ್ದಾನೆ. ಇವನ ಶೈಲಿ ಕ್ಲಿಷ್ಟವೂ ತೊಡಕಿನದೂ ಆಗಿದ್ದುದರಿಂದ ಬಹಳ ಕಾಲದ ತನಕ ಇವನ ವಿಮರ್ಶಾ ಗ್ರಂಥಗಳು ಅಷ್ಟಾಗಿ ಸಾಹಿತಿಗಳ ಗಮನವನ್ನು ಸೆಳೆದಿರಲಿಲ್ಲ. ಇವನ ನಿಧನಾನಂತರ ಮಿಷೆಲೆಟ್ ಮತ್ತು ಕ್ರೋಚ್ ಇವನ ಗ್ರಂಥಗಳನ್ನು ಪರಿಚಯಮಾಡಿಕೊಟ್ಟರು. ಅನಂತರ ಇವು ಸಾಹಿತ್ಯಾಸಕ್ತರ ಗಮನ ಸೆಳೆದವು. ಇವನ ಮುಖ್ಯ ಗ್ರಂಥಗಳಾದ ನೂತನ ವಿಜ್ಞಾನ (ಸೈನ್ಜ್‍ನೂವ 1775), ವಿಚಾರದ ಅಧ್ಯಯನ, ಅಚಲವಾದ ನ್ಯಾಯಶಾಸ್ತ್ರ - ಇವುಗಳಿಂದ ಇತಿಹಾಸ, ಕಾವ್ಯಶಾಸ್ತ್ರಗಳನ್ನು ಕುರಿತ ಇವನ ಅಭಿಪ್ರಾಯಗಳನ್ನು ತಿಳಿಯಬಹುದಾಗಿದೆ. 

	ನೂತನ ವಿಜ್ಞಾನ ಎಂಬ ಗ್ರಂಥದಲ್ಲಿ ಕಾವ್ಯವನ್ನು ಕುರಿತ ಸೂತ್ರಪ್ರಾಯವಾದ ಹೊಸ ಮಾತುಗಳಿವೆ; ದೇವವಂಶಾ ವಳಿ, ಕಾಲಗಣನಾಶಾಸ್ತ್ರ, ಬಿರುದು ಬಾವಲಿಗಳ ಇತಿಹಾಸ, ಕಟ್ಟುಕತೆಗಳನ್ನು ಕುರಿತ ಚರ್ಚೆಗಳೂ ಸೇರಿಕೊಂಡಿವೆ. ಈ ಗ್ರಂಥದ ಎರಡನೆಯ ಭಾಗದಲ್ಲಿ ವಿಜ್ಞಾನ ಹಾಗೂ ಕಾವ್ಯಶಾಸ್ತ್ರ ಕುರಿತು ಪ್ರಾಸ್ತಾವಿ ಕವಾಗಿ ಚರ್ಚಿಸಿದ ಅನಂತರ ಕಾವ್ಯದ ಅಧ್ಯಾತ್ಮ, ಕಾವ್ಯದ ತರ್ಕ, ಕಾವ್ಯದ ನೀತಿಶಾಸ್ತ್ರ, ಕಾವ್ಯದ ರಾಜಕೀಯಶಾಸ್ತ್ರ-ಎಂದು ಬೇರೆ ಬೇರೆಯಾಗಿ ವಿಂಗಡಿಸಿ ಸುದೀರ್ಘ, ವಿಚಿತ್ರ, ಕೆಲವು ವೇಳೆ ಅಸಂಬದ್ಧ ಚರ್ಚೆಯಲ್ಲಿ ತೊಡಗಿರುವುದು ಕಂಡುಬರುತ್ತದೆ. ಆದರೆ ಕಾವ್ಯವನ್ನು ಉದ್ದೇಶಿಸಿ ಸಾರ್ವಕಾಲಿಕವೂ ಸ್ಮರಣೀಯವೂ ಆದ ಮಾತುಗಳನ್ನು ಈತ ಹೇಳಿದ್ದಾನೆ. ಈ ಗ್ರಂಥದ ದೊಡ್ಡ ದೋಷವೆಂದರೆ ಅಲ್ಲಲ್ಲಿ ಸಾಹಿತ್ಯ ವಿಮರ್ಶೆಗೆ ಸೇರದ ವಿಷಯಗಳನ್ನು ಚರ್ಚಿಸಿರುವುದು. ಹೋಮರ್ ಕವಿಯ ವಿಚಾರವಾಗಿ ಇವನು ಆಡಿರುವ ಕೆಲವು ಮಾತುಗಳೂ ಹೋಮರ ನನ್ನು ಡಾಂಟೆಯೊಂದಿಗೆ ಅಲ್ಲಲ್ಲಿ ಹೋಲಿಸಿರುವುದೂ ಔಚಿತ್ಯಪೂರ್ಣವೆ ನಿಸುವುದಿಲ್ಲ. ಹೋಮರ್ ಎಂಬ ವ್ಯಕ್ತಿಯೇ ಇರಲಿಲ್ಲವೆಂದೂ ಅವನ ಹೆಸರಿನಲ್ಲಿ ಪುರಾತನ ಗ್ರೀಸ್ ದೇಶ ತನ್ನ ಇತಿಹಾಸವನ್ನು ಕಾವ್ಯರೂಪದಲ್ಲಿ ನಿರೂಪಿಸಿದೆಯೆಂದೂ ಈತ ಹೇಳುತ್ತಾನೆ. ಡಾಂಟೆಯ ಕಲ್ಪನಾ ಶಕ್ತಿಯನ್ನು ಶ್ಲಾಘಿಸುತ್ತಾನೆ. ಆದರೆ ಅವನ ಉದ್ದಾಮ ಕೃತಿಯಲ್ಲಿಯ (ಡಿವೈನ್‍ಕಾಮಿಡಿ) ಅಸದೃಶ ಅನ್ಯೋಕ್ತಿ (ಅಲಿಗರಿ) ಮತ್ತು ಧಾರ್ಮಿಕ ಚರ್ಚೆಯನ್ನು (ಥಿಯೋಲಜಿ) ಅಷ್ಟಾಗಿ ಗಮನಿಸುವುದಿಲ್ಲ. ಬೇರೆ ಬೇರೆ ಸಾಹಿತಿಗಳನ್ನು ಕುರಿತು ಇವನು ಕೊಟ್ಟಿರುವ ಅಭಿಪ್ರಾಯಗಳಲ್ಲಿ ವಿಮರ್ಶಾದೃಷ್ಟಿಯ ಕೊರತೆಯಿದೆ. ಕಾವ್ಯ ಐತಿಹಾಸಿಕ ದಾಖಲೆ; ಕವಿ ಪ್ರಾಚೀನ ಯುಗದ ಚರಿತ್ರಕಾರ, ದಾರ್ಶನಿಕ, ನ್ಯಾಯಶಾಸ್ತ್ರಜ್ಞ, ನೀತಿಶಾಸ್ತ್ರ ವಿಶಾರದ, ಲೌಕಿಕ ಪಂಡಿತ ಎಂದು ಹೇಳುವ ಇವನ ಮಾತುಗಳಲ್ಲಿ ವಿಮರ್ಶಕನಿಗಿರಬೇಕಾದ ತರತಮ್ಯ ದೃಷ್ಟಿ, ಅಭಿರುಚಿ ಕಂಡುಬರುವುದಿಲ್ಲ. ಇಷ್ಟಾದರೂ ಈತ ಆಧುನಿಕ ವಿಮರ್ಶಕರಿಗೆ ಹಲವು ವಿಧದಲ್ಲಿ ಮಾರ್ಗದರ್ಶಕನೆಂದು ಹೇಳಬಹುದು. ಹತ್ತೊಂಬತ್ತನೆಯ ಶತಮಾನದ ವಿಮರ್ಶಾ ಪದ್ಧತಿಯಲ್ಲಿ ಹೊಸದಾಗಿ ಬೆಳೆದುಬಂದ ಐತಿಹಾಸಿಕತೆ ಮತ್ತು ಸೌಂದರ್ಯಶಾಸ್ತ್ರಗಳ ಮುಂದಾಳುವೆಂದು  ಇವನನ್ನು ಸ್ಮರಿಸಲಾಗುತ್ತದೆ. ಈತ 1744ರಲ್ಲಿ ನಿಧನನಾದ.			
	(ಎಚ್.ಕೆ.ಆರ್.)

   *

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ